ರಾಜ್ಯ ಹೆದ್ದಾರಿ ತಡೆದು ರೈತರ ಆಕ್ರೋಶ
ರೈತರ ತಾಳ್ಮೆ ಪರೀಕ್ಷಿಸಬೇಡಿ ರೈತ ಮುಖಂಡ ರಾಜು ನದಾಫ್ ಎಚ್ಚರಿಕೆ
ಜಮಖಂಡಿ: ರೈತ ಪರ ಸರ್ಕಾರ ಎಂದು ಹೇಳಿಕೊಳ್ಳುವ ಸರ್ಕಾರಗಳು ರೈತರ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು ಆಗ್ರಹಿಸಿ ರೈತರು ವಿಜಯಪುರ–ಧಾರವಾಡ ಹಾಗೂ ಕುಡಚಿ ರಾಜ್ಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಆಲಗೂರ ಗಡ್ಡೆ, ಕವಟಗಿ ಕ್ರಾಸ್, ಹುಲ್ಯಾಳ ಕ್ರಾಸ್, ಟಕ್ಕೋಡ, ತುಂಗಳ ಗ್ರಾಮಗಳು ಹಾಗೂ ನಗರದ ತಾಲೂಕು ಆಡಳಿತ ಸೌಧದ ಎದುರು ರಸ್ತೆ ಸಂಚಾರ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ರಾಜು ನದಾಫ್ ಮಾತನಾಡಿ, ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು. ರೈತರ ಪರ ಎಂದು ಹೇಳಿಕೊಳ್ಳುವ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಷ್ಟ ಉತ್ತರ ನೀಡುವ ಧೈರ್ಯ ತೋರಿಸುತ್ತಿಲ್ಲ. ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದರೂ ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಕಾರ್ಖಾನೆ ಮಾಲೀಕರು ರೈತರನ್ನು ಹೋರಾಟಗಾರರು ಮತ್ತು ಹೋರಾಟ ಮಾಡದವರು ಎಂದು ವಿಭಜಿಸಿ ಒಡೆದು ಆಳುವ ನೀತಿ ಅನುಸರಿಸಬಾರದು. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದ್ದು, ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಜಿಲ್ಲಾಡಳಿತವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸುರೇಶ ಹಂಚಿನಾಳ, ಶೀತಲ ಸಿದ್ದೋಜಿ, ಶಿವಕುಮಾರ ಲಿಗಾಡೆ, ಶೀತಲ ಕೊನಗೊಂಡ, ಪರಪ್ಪ ಪಾಟೀಲ, ಬಾಹುಬಲಿ ನರಸಗೊಂಡ, ಪ್ರಭು ನರಸಗೊಂಡ, ಮಹಾವೀರ ಸಿದ್ದೋಜಿ, ಮಲ್ಲಪ್ಪ ದೆಯಗೊಂಡ, ಅಪ್ಪು ಜೈನಾಪೂರ, ಪ್ರವೀಣ ಲಿಗಾಡಿ, ಶ್ರೀಧರ ಪಾಟೀಲ, ಶ್ರೀಮಂತ ಚೌರಿ ಸೇರಿದಂತೆ ರೈತರು ಪಾಲ್ಗೊಂಡಿದ್ದರು.
ಶಾಲಾ ಮಕ್ಕಳ ಪರದಾಟ
ಏಕಾಏಕಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಶಾಲಾ-ಕಾಲೇಜುಗಳಿಗೆ ತೆರಳಿದ್ದ ಮಕ್ಕಳು ತೀವ್ರ ತೊಂದರೆ ಅನುಭವಿಸಿದರು. ರಸ್ತೆ ಪಕ್ಕದಲ್ಲಿ ಸರದಿ ಸಾಲಿನಲ್ಲಿ ನಡೆದುಕೊಂಡು ತೆರಳಬೇಕಾಯಿತು. ವಾಹನ ಸವಾರರು ಹಾಗೂ ಆಸ್ಪತ್ರೆಗೆ ತೆರಳುತ್ತಿದ್ದ ರೋಗಿಗಳೂ ಪರದಾಡುವಂತಾಯಿತು.
ವಿಷಯಗಳು





