ಮುಖ್ಯ ವಿಷಯಕ್ಕೆ ತೆರಳಿ
ನಾದಫ್ ಸಾರಥ್ಯದಲ್ಲಿ ಹೊಸಬೆಳಕು
ಜಿಲ್ಲೆ

ಜಮಖಂಡಿಯಲ್ಲಿ ಮಿತಿಮೀರಿದ ಬ್ಯಾನರ್ ಹಾವಳಿ!

ಬರಹ: ಎಂ. ಎನ್. ನದಾಫ್2 ನಿಮಿಷ ಓದು

ಸರ್ಕಾರದ ಆದೇಶಕ್ಕೆ ಅಧಿಕಾರಿಗಳ ಡೋಂಟ್ ಕೇರ್ ಸಿಗ್ನಲ್‌ಗಳೇ ಕಾಣದಷ್ಟು ಫ್ಲೆಕ್ಸ್ ಅಬ್ಬರ ಅನುಮತಿ ಇಲ್ಲದೆ ಬ್ಯಾನರ್ ಅಳವಡಿಕೆ ನಗರಸಭೆಯ ಮೌನದ ಹಿಂದಿನ ಮರ್ಮವೇನು?

ಎಂ. ಎನ್. ನದಾಫ್ | ಜಮಖಂಡಿ

ಸರ್ಕಾರದ ಆದೇಶ ಕೇವಲ ಕಾಗದಕ್ಕೆ ಸೀಮಿತವಾಗಿದೆಯೇ? ಸಾರ್ವಜನಿಕರ ಸುರಕ್ಷತೆಗಿಂತ ಬ್ಯಾನರ್‌ಗಳ ಹಾವಳಿಯೇ ಮುಖ್ಯವಾಗಿದೆಯೇ? ಪರಿಸರ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳ ಕಣ್ಣಿಗೆ ನಗರದಾದ್ಯಂತ ರಾರಾಜಿಸುತ್ತಿರುವ ಫ್ಲೆಕ್ಸ್ಗಳು ಕಾಣುತ್ತಿಲ್ಲವೇ? ಇಂತಹ ಹಲವು ಪ್ರಶ್ನೆಗಳು ಇದೀಗ ಜಮಖಂಡಿ ನಗರದ ನಾಗರಿಕರನ್ನು ಕಾಡುತ್ತಿವೆ.

ಪ್ಲಾಸ್ಟಿಕ್ ಹಾಗೂ ಪರಿಸರಕ್ಕೆ ಹಾನಿಕಾರಕವಾದ ಫ್ಲೆಕ್ಸ್ ಬಳಕೆಯನ್ನು ನಿಯಂತ್ರಿಸುವಂತೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರೂ, ಜಮಖಂಡಿ ನಗರದಲ್ಲಿ ಮಾತ್ರ ಬ್ಯಾನರ್ ಮತ್ತು ಕಟೌಟ್‌ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರದ ಆದೇಶಕ್ಕೆ ಸ್ಥಳೀಯ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ನಿಯಮ ಉಲ್ಲಂಘನೆ ಕಣ್ಣೆದುರೇ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ಧೋರಣೆ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ವೃತ್ತಗಳೆಲ್ಲ ಬ್ಯಾನರ್ ಮಯ!

ನಗರದ ಹೃದಯಭಾಗವಾದ ದೇಸಾಯಿ ಸರ್ಕಲ್, ಬಸ್ ನಿಲ್ದಾಣ ರಸ್ತೆ, ಶಿವಾಜಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಟಿಪ್ಪು ಸುಲ್ತಾನ್ ಸರ್ಕಲ್, ಹಳೇ ತಹಶೀಲ್ದಾರ್ ಕಚೇರಿ, ಹನುಮಾನ್ ಚೌಕ್, ಅರ್ಬನ್ ಬ್ಯಾಂಕ್ ಸೇರಿದಂತೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬ್ಯಾನರ್‌ಗಳು, ಫ್ಲೆಕ್ಸ್ಗಳು, ಬೃಹತ್ ಕಟೌಟ್‌ಗಳು ರಾಜಾರೋಷವಾಗಿ ರಾರಾಜಿಸುತ್ತಿವೆ.

ದೇಸಾಯಿ ಸರ್ಕಲ್, ಟಿಪ್ಪು ಸುಲ್ತಾನ್ ಸರ್ಕಲ್‌ನಲ್ಲಿ ಸ್ವಾಗತ ಕಮಾನುಗಳ ಬೃಹತ್ ಬ್ಯಾನರ್‌ಗಳು ಸಂಚಾರ ನಿಯಂತ್ರಣ ಸಿಗ್ನಲ್‌ಗಳೇ ಕಾಣದಂತೆ ಅಡ್ಡಿಯಾಗಿವೆ. ವಾಹನ ಸವಾರರಿಗೆ ಸಿಗ್ನಲ್ ದೀಪಗಳು ಗೋಚರಿಸದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಘಾತಗಳಿಗೆ ಆಹ್ವಾನ ನೀಡುವಂತಿದೆ. ಸಾರ್ವಜನಿಕರ ಜೀವದ ಸುರಕ್ಷತೆಯ ಪ್ರಶ್ನೆ ಎದುರಾದರೂ ಸಂಭಂದಪಟ್ಟ ಅಧಿಕಾರಿಗಳು ಏಕೆ ಮೌನವಾಗಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಜಾತ್ರೆ, ಹಬ್ಬ-ಹರಿದಿನಗಳು, ರಾಜಕೀಯ ಸಮಾರಂಭಗಳು, ನಾಯಕರ ಜನ್ಮದಿನ, ಮದುವೆ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮಕ್ಕೂ ಬ್ಯಾನರ್ ಅಳವಡಿಸುವುದು ನಗರದಲ್ಲಿ ಪೈಪೋಟಿಯ ವಿಷಯವಾಗಿದೆ. ಸಾರ್ವಜನಿಕ ಸ್ಥಳಗಳು ಖಾಸಗಿ ಪ್ರಚಾರದ ವೇದಿಕೆಗಳಾಗಿ ಮಾರ್ಪಡುತ್ತಿವೆ.

ರಸ್ತೆ ಬದಿಗಳಲ್ಲಿ ಬೇಕಾಬಿಟ್ಟಿಯಾಗಿ ಅಳವಡಿಸುವ ಕಟೌಟ್‌ಗಳಿಂದ ಪಾದಚಾರಿಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಗಾಳಿ-ಮಳೆಗೆ ಕಟೌಟ್‌ಗಳು ಉರುಳಿ ಬೀಳುವ ಅಪಾಯವಿದೆ. ಈ ಹಿಂದೆ ಕಟೌಟ್‌ಗಳು ಬಿದ್ದು ಬೈಕ್ ಸವಾರರು ಗಾಯಗೊಂಡ ಘಟನೆಗಳೂ ನಡೆದಿವೆ. ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳ ಎದುರು ಬ್ಯಾನರ್‌ಗಳನ್ನು ಕಟ್ಟುವುದರಿಂದ ವ್ಯಾಪಾರ ವಹಿವಾಟಿಗೂ ತೊಂದರೆಯಾಗುತ್ತಿದೆ.

ಪ್ಲಾಸ್ಟಿಕ್ ಮಿಶ್ರಿತ ವಸ್ತುಗಳಿಂದ ತಯಾರಾಗುವ ಫ್ಲೆಕ್ಸ್ಗಳು ಪರಿಸರಕ್ಕೆ ದೊಡ್ಡ ಅಪಾಯ ತಂದೊಡ್ಡುತ್ತಿವೆ. ಕಾರ್ಯಕ್ರಮ ಮುಗಿದ ಬಳಿಕ ತೆರವುಗೊಳಿಸದೆ ರಸ್ತೆಯ ಬದಿ ಹಾಗೂ ಕಸದ ರಾಶಿಯಲ್ಲಿ ಎಸೆಯಲಾಗುವ ಬ್ಯಾನರ್ ತುಂಡುಗಳನ್ನು ಆಹಾರದೊಂದಿಗೆ ಮೂಕಪ್ರಾಣಿಗಳು ಸೇವಿಸುವ ಅಪಾಯವಿದೆ. ಇದರಿಂದ ಪ್ರಾಣಿಗಳ ಆರೋಗ್ಯ ಹಾಗೂ ಜೀವಕ್ಕೆ ಕಂಟಕ ಎದುರಾಗುತ್ತಿದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಇಂತಹ ವಸ್ತುಗಳ ಬಳಕೆಯನ್ನು ನಿಯಂತ್ರಿಸುವ ಜವಾಬ್ದಾರಿ ಯಾರದ್ದು?

ಅಧಿಕಾರಿಗಳ ಕಣ್ಣೆದುರೇ ನಿಯಮ ಉಲ್ಲಂಘನೆ!

ನಗರಸಭೆಯ ಅಧಿಕೃತ ಅನುಮತಿ ಪಡೆಯದೆ, ನಿಗದಿತ ಶುಲ್ಕ ಪಾವತಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸಲಾಗುತ್ತಿದೆ ಎಂಬ ಆರೋಪಗಳಿವೆ. ಇದರಿಂದ ಸ್ಥಳೀಯ ಸಂಸ್ಥೆಯ ಆದಾಯಕ್ಕೂ ನಷ್ಟವಾಗುತ್ತಿದೆ. ಅಧಿಕಾರಿಗಳು ಪ್ರತಿನಿತ್ಯ ಸಂಚರಿಸುವ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲೇ ಬೃಹತ್ ಬ್ಯಾನರ್‌ಗಳು ಕಂಡುಬರುತ್ತಿದ್ದರೂ ಅವುಗಳನ್ನು ತೆರವುಗೊಳಿಸಲು ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅಧಿಕಾರಿಗಳ ಈ ಮೌನಕ್ಕೆ ಕಾರಣವೇನು? ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದೇಕೆ? ಪ್ರಭಾವಿಗಳ ಬ್ಯಾನರ್‌ಗಳಾಗಿದ್ದರೆ ನಿಯಮಗಳು ಅನ್ವಯಿಸುವುದಿಲ್ಲವೇ? ಸಾಮಾನ್ಯ ನಾಗರಿಕರಿಗೆ ಒಂದು ನಿಯಮ, ಪ್ರಭಾವಿಗಳಿಗೆ ಮತ್ತೊಂದು ನಿಯಮವೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ನಗರಸಭೆ ಎಚ್ಚೆತ್ತುಕೊಳ್ಳುವುದು ಯಾವಾಗ?

ನಗರದ ಸೌಂದರ್ಯ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆ ಕಾಪಾಡಬೇಕಾದ ನಗರಸಭೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಅನುಮತಿ ಪಡೆಯದೆ ಅಳವಡಿಸಿರುವ ಬ್ಯಾನರ್ ಮತ್ತು ಕಟೌಟ್‌ಗಳನ್ನು ತಕ್ಷಣ ತೆರವುಗೊಳಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸಿಗ್ನಲ್ ದೀಪಗಳು ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿರುವ ಬ್ಯಾನರ್‌ಗಳನ್ನು ತೆರವುಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಸರ್ಕಾರದ ಆದೇಶ ಪಾಲನೆಯಾಗದಿದ್ದರೆ ಅದಕ್ಕೆ ಹೊಣೆಗಾರರು ಯಾರು ಎಂಬುದನ್ನು ನಗರಸಭೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ. ಜಮಖಂಡಿ ನಗರವನ್ನು ಬ್ಯಾನರ್ ಮುಕ್ತ, ಸ್ವಚ್ಛ ಹಾಗೂ ಸುರಕ್ಷಿತ ನಗರವನ್ನಾಗಿ ರೂಪಿಸಲು ಅಧಿಕಾರಿಗಳು ಇನ್ನಾದರೂ ಕಠಿಣ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

ಬಡವರು ನಗರಸಭೆಗೆ ಹಣ ಪಾವತಿಸಿ ಪರವಾಣಿಗಿ ಪಡೆದು ಬ್ಯಾನರ್ ಕಟ್ಟಿದರೆ ಅವಧಿ ಮುಗಿದ ತಕ್ಷಣ ನಗರಸಭೆಯವರು ಬಂದು ಕಿತ್ತುಕೊಂಡು ಹೊಗುತ್ತಾರೆ ಆದರೆ ಶ್ರೀಮಂತರು ನಗರಸಭೆಗೆ ಹಣ ಪಾವತಿಸದೆ ತಿಂಗಳಾನುಗಟ್ಟಲೆ ಬ್ಯಾನರ್ ಕಟ್ಟುತ್ತಾರೆ ಆದರೆ ಅವರ ಬ್ಯಾನರ್‌ಗಳು ಅಧಿಕಾರಿಗಳ ಕಣ್ಣಿಗೆ ಕಾಣುವುದಿಲ್ಲ ಅನ್ನಿಸುತ್ತೆ, ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಇದೆ ಅನ್ಸುತ್ತೆ. ಹೆಸರು ಹೆಳಲಿಚ್ಚಸದ

ಇನ್ನಷ್ಟು ಜಿಲ್ಲೆ ಸುದ್ದಿಗಳು

ಎಲ್ಲಾ ನೋಡಿ