ಕೃಷಿ ಕೂಲಿ ಕಾರ್ಮಿಕರ ಮಗನ ವೈದ್ಯಕೀಯ ಸಾಧನೆ
ಬಡತನದ ಬೇಗೆಯಲ್ಲೂ ಅರಳಿದ ವೈದ್ಯಕೀಯ ಕನಸು! ಕೂಲಿ ಕೆಲಸ ಮಾಡಿ ಮಗನ ಭವಿಷ್ಯ ರೂಪಿಸಿದ ತಂದೆ-ತಾಯಿ ನೀಟ್ನಲ್ಲಿ 1.36 ಲಕ್ಷ ರ್ಯಾಂಕ್ನೋಂದಿಗೆ ಬಿಎಎಂಎಸ್ ಸರ್ಕಾರಿ ಸೀಟ್ಗೆ ಅರ್ಹತೆ
ಎಂ.ಎನ್. ನದಾಫ್ | ಜಮಖಂಡಿ
ಬಡತನ ಸಾಧನೆಗೆ ಎಂದಿಗೂ ಅಡ್ಡಿಯಾಗಲಾರದು ಎಂಬುದನ್ನು ತಾಲೂಕಿನ ಕೊಣ್ಣೂರ ಗ್ರಾಮದ ಕೃಷಿ ಕೂಲಿ ಕಾರ್ಮಿಕ ದಂಪತಿಗಳ ಪುತ್ರ ಸಾಬೀತುಪಡಿಸಿದ್ದಾನೆ. ದಿನವಿಡೀ ಬೇರೆಯವರ ಹೊಲಗಳಲ್ಲಿ ಬೆವರು ಸುರಿಸಿ ಜೀವನ ಸಾಗಿಸುವ ತಂದೆ-ತಾಯಿಯ ಕಷ್ಟದ ಬದುಕಿನ ನಡುವೆ ಶಿಕ್ಷಣದ ಮೂಲಕ ಉನ್ನತ ಸಾಧನೆ ಮಾಡಬೇಕೆಂಬ ಕನಸು ಕಂಡ ಯುವಕ ಇದೀಗ ವೈದ್ಯಕೀಯ ಶಿಕ್ಷಣದತ್ತ ಹೆಜ್ಜೆ ಇಟ್ಟಿದ್ದಾನೆ.
ಗ್ರಾಮದ ಕೃಷಿ ಕೂಲಿ ಕಾರ್ಮಿಕರಾದ ಮಾರುತಿ ಕಣಗಾರ, ಯಲ್ಲವ್ವ ಕಣಗಾರ ದಂಪತಿಯ ಪುತ್ರ ಕರಿಯಪ್ಪ ಮಾರುತಿ ಕಣಗಾರ ಸಾಧನೆ ಮಾಡಿದ ಯುವಕ.
ಕೂಲಿ ಕೆಲಸವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಈ ದಂಪತಿಗೆ ತಮ್ಮ ಮಗ ಉನ್ನತ ಶಿಕ್ಷಣ ಪಡೆದು ಉತ್ತಮ ಹುದ್ದೆ ಅಲಂಕರಿಸಬೇಕು, ಭವಿಷ್ಯದಲ್ಲಿ ಸಮಾಜದ ಜನರ ಸೇವೆ ಮಾಡಬೇಕು ಎಂಬ ಮಹದಾಸೆಯಿತ್ತು. ಇದಕ್ಕಾಗಿ ತಮ್ಮ ದುಡಿಮೆಯ ಬಹುಪಾಲು ಹಣವನ್ನು ಮಗನ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದರು. ತಂದೆ-ತಾಯಿಯ ತ್ಯಾಗ ಮತ್ತು ಪ್ರೋತ್ಸಾಹವನ್ನು ಸ್ಫೂರ್ತಿಯಾಗಿಸಿಕೊಂಡ ಕರಿಯಪ್ಪ ವೈದ್ಯನಾಗುವ ಕನಸು ಕಟ್ಟಿಕೊಂಡಿದ್ದ.
ಎಂಬಿಬಿಎಸ್ ವೈದ್ಯನಾಗಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಕರಿಯಪ್ಪ, ಪರೀಕ್ಷೆಯಲ್ಲಿ 1.36 ಲಕ್ಷ ರ್ಯಾಂಕ್ ಪಡೆಯುವ ಮೂಲಕ ಬಿಎಎಂಎಸ್ ವೈದ್ಯಕೀಯ ಕೋರ್ಸ್ನ ಸರ್ಕಾರಿ ಸೀಟಿಗೆ ಅರ್ಹತೆ ಪಡೆದುಕೊಂಡಿದ್ದಾನೆ. ಆತನ ಉಜ್ವಲ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸಿದ ತಂದೆ-ತಾಯಿಯ ಬೆವರಿನ ದುಡಿಮೆಗೆ ಪ್ರತಿಫಲ ನೀಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಗ್ರಾಮೀಣ ಪ್ರತಿಭೆಗೆ ಸ್ಫೂರ್ತಿಯಾದ ಸಾಧನೆ
ಸಾಮಾನ್ಯವಾಗಿ ಆರ್ಥಿಕವಾಗಿ ಅನುಕೂಲವಿರುವ ಕುಟುಂಬಗಳ ಮಕ್ಕಳಿಗೆ ದೊರೆಯುವ ಆರೋಗ್ಯ ಶೈಕ್ಷಣಿಕ ಸೌಲಭ್ಯಗಳು, ಅವಕಾಶಗಳು ಬಡ ಕುಟುಂಬಗಳ ಮಕ್ಕಳಿಗೆ ಸುಲಭವಾಗಿ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ಪರಿಶ್ರಮ, ಆತ್ಮವಿಶ್ವಾಸ ಹಾಗೂ ತಂದೆ-ತಾಯಿಯ ಪ್ರೋತ್ಸಾಹದಿಂದ ವೈದ್ಯಕೀಯ ಶಿಕ್ಷಣದ ಬಾಗಿಲು ತೆರೆದಿರುವ ಕರಿಯಪ್ಪನ ಸಾಧನೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೊಸ ಭರವಸೆ ಮೂಡಿಸಿದೆ.
ಕೃಷಿ ಕೂಲಿ ಕಾರ್ಮಿಕರ ಕುಟುಂಬದಿಂದ ಬಂದ ಯುವಕ ವೈದ್ಯಕೀಯ ಶಿಕ್ಷಣದತ್ತ ಹೆಜ್ಜೆ ಇಟ್ಟಿರುವುದು ಕೊಣ್ಣೂರ ಗ್ರಾಮದಲ್ಲಿ ಸಂತಸ ಮೂಡಿಸಿದೆ. ಕರಿಯಪ್ಪನ ಸಾಧನೆಗೆ ಹಿರಿಯ ನ್ಯಾಯವಾದಿ ಜಿ.ಕೆ. ಮಠದ, ನಿವೃತ್ತ ಅಧಿಕಾರಿ ಎ.ಜಿ. ಮುಂಡಗನೂರ, ಟಿ.ಬಿ. ಮುಜಾವರ ಹಾಗೂ ಆದಿಲ್ ಮುಂಡಗನೂರ ಸೇರಿದಂತೆ ಗಣ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಮಗ ವೈದ್ಯನಾಗಬೇಕೆಂಬ ತಂದೆ-ತಾಯಿಯ ಕನಸು ನನಸಾಗುವ ಹಾದಿಯಲ್ಲಿದೆ. ಬಡತನದ ನಡುವೆಯೂ ಶಿಕ್ಷಣದ ಬೆಳಕು ಆರದಂತೆ ಕಾಪಾಡಿಕೊಂಡ ಕುಟುಂಬದ ಪರಿಶ್ರಮಕ್ಕೆ ದೊರೆತ ಈ ಯಶಸ್ಸು, ಗ್ರಾಮೀಣ ಪ್ರತಿಭೆಗಳು ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ಎಂತಹ ಸಾಧನೆಯನ್ನಾದರೂ ಮಾಡಬಲ್ಲವು ಎಂಬುದಕ್ಕೆ ತಾಜಾ ಉದಾಹರಣೆಯಾಗಿದೆ ಎಂದು ಹಿರಿಯ ನ್ಯಾಯವಾದಿ ಜಿ.ಕೆ.ಮಠದ ಅವರು ಹರ್ಷ ವ್ಯಕ್ತಪಡಿಸಿದರು.





