ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಪತ್ತೆ: ತೈಲ ಕಂಪನಿಗಳ ವಿರುದ್ಧ ಆಹಾರ ಸಚಿವ ರಿಜ್ವಾನ್ ಅರ್ಷದ್ ಆರೋಪ
ಬೆಂಗಳೂರು: ರಾಜ್ಯದ ಪ್ರಮುಖ ತೈಲ ಮಾರಾಟ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್ನಲ್ಲಿ ನಿಗದಿತ ಶೇಕಡ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.
ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಎಥೆನಾಲ್ ಪ್ರಮಾಣ ಗರಿಷ್ಠ ಶೇಕಡ 31.2ರ ವರೆಗೆ ಇರುವುದು ಪತ್ತೆಯಾಗಿದೆ. ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್, ಈ ಪರೀಕ್ಷಾ ವರದಿಯ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 63 ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿತ್ತು. ಐಒಸಿಎಲ್, ಎಚ್ಪಿಸಿಎಲ್, ಬಿಪಿಸಿಎಲ್, ನಯಾರಾ ಎನರ್ಜಿ, ಶೆಲ್, ಎಂಆರ್ಪಿಎಲ್ ಕಂಪನಿಗಳ ಪೆಟ್ರೋಲ್ ಮಾದರಿಗಳಲ್ಲಿ ಶೇಕಡ 20ಕ್ಕಿಂತ ಹೆಚ್ಚು ಎಥೆನಾಲ್ ಇರುವುದು ದೃಢಪಟ್ಟಿದೆ. ಐಒಸಿಎಲ್ನ ಮಾದರಿಯಲ್ಲಿ ಶೇಕಡ 31.2 ಹಾಗೂ ಎಚ್ಪಿಸಿಎಲ್ ಪವರ್ ಮಾದರಿಯಲ್ಲಿ ಶೇಕಡ 30.5ರಷ್ಟು ಎಥೆನಾಲ್ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.



