ಜಮಖಂಡಿ ಕ್ರೀಡಾಂಗಣದಲ್ಲಿ ಕ್ರೀಡಾ ಕಿಚ್ಚು!

ಕರ್ನಾಟಕಕ್ಕೆ ನಾಲ್ಕನೇ ಸ್ಥಾನ; ರಾಜಸ್ಥಾನದ ಎಸ್ಎಸ್ಬಿ ರನ್ನರ್ಅಪ್
ಎಂ.ಎನ್. ನದಾಫ್ | ಜಮಖಂಡಿ
ಜಿದ್ದಾಜಿದ್ದಿನ ಹೋರಾಟ... ಮಿಂಚಿನ ದಾಳಿ... ಎದುರಾಳಿಯ ಹಿಡಿತದಿಂದ ತಪ್ಪಿಸಿಕೊಳ್ಳುವ ಚಾಣಾಕ್ಷತನ... ಪ್ರತಿ ಅಂಕಕ್ಕೂ ಪೈಪೋಟಿ... ಗೆಲುವಿಗಾಗಿ ಕೊನೆಯ ಕ್ಷಣದವರೆಗೂ ಸೆಣಸಾಟ! ಇಂತಹ ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಜಮಖಂಡಿ ತಾಲೂಕಾ ಕ್ರೀಡಾಂಗಣದಲ್ಲಿ ಮಹಿಳಾ ಕಬಡ್ಡಿ ಪಂದ್ಯಾವಳಿ ಕ್ರೀಡಾಭಿಮಾನಿಗಳಿಗೆ ರೋಮಾಂಚನದ ಅನುಭವ ನೀಡಿತು.
ನಗರದಲ್ಲಿ ಕನ್ನಡ ಸಂಘದ 60ನೇ ವರ್ಷಾಚರಣೆ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ತಂಡ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಅಲಂಕರಿಸಿತು. ರಾಜಸ್ಥಾನದ ಎಸ್ಎಸ್ಬಿ ತಂಡ ರನ್ನರ್ಅಪ್ ಸ್ಥಾನ ಪಡೆದುಕೊಂಡರೆ, ಹರಿಯಾಣದ ಎಸ್ಎಸ್ಎ ತಂಡ ತೃತೀಯ ಸ್ಥಾನ ಗಳಿಸಿತು. ಆತಿಥೇಯ ಕರ್ನಾಟಕ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಪಂದ್ಯಾವಳಿಗಳ ಆರಂಭದಿಂದಲೇ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಅಂಕಗಳ ಬೇಟೆಗೆ ಎದುರಾಳಿ ಪಾಳಯಕ್ಕೆ ನುಗ್ಗಿದ ಆಟಗಾರ್ತಿಯರ ಚುರುಕುತನ, ಎದುರಾಳಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವ ರಕ್ಷಣಾ ತಂತ್ರ, ಮಿಂಚಿನ ವೇಗದಲ್ಲಿ ನಡೆಸಿದ ದಾಳಿಗಳು ಮೈದಾನದಲ್ಲಿ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸಿದವು.
ವಿಶೇಷವಾಗಿ ಸೆಮಿಫೈನಲ್ ಪಂದ್ಯಗಳು ಪ್ರೇಕ್ಷಕರಲ್ಲಿ ಕ್ರೀಡಾ ರೋಮಾಂಚನ ಮೂಡಿಸಿದವು. ರಾಜಸ್ಥಾನದ ಎಸ್ಎಸ್ಬಿ ತಂಡ ಕರ್ನಾಟಕದ ವಿರುದ್ಧ 24-22 ಅಂಕಗಳ ಅಂತರದ ರೋಚಕ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ನಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ತಂಡ ಹರಿಯಾಣದ ಎಸ್ಎಸ್ಎ ತಂಡವನ್ನು 24-8 ಅಂಕಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.
ಫೈನಲ್ನಲ್ಲಿ ರೈಲ್ವೆ ತಂಡದ ಪ್ರಾಬಲ್ಯ:
ಚಾಂಪಿಯನ್ ಪಟ್ಟಕ್ಕಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ಮತ್ತು ರಾಜಸ್ಥಾನದ ಎಸ್ಎಸ್ಬಿ ತಂಡಗಳು ಮುಖಾಮುಖಿಯಾದವು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ರೈಲ್ವೆ ತಂಡ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸುತ್ತಾ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ರಾಜಸ್ಥಾನ ತಂಡ ತಿರುಗೇಟು ನೀಡಲು ಪ್ರಯತ್ನಿಸಿದರೂ ರೈಲ್ವೆ ಆಟಗಾರ್ತಿಯರ ಸಂಘಟಿತ ದಾಳಿ ಮತ್ತು ಪರಿಣಾಮಕಾರಿ ರಕ್ಷಣೆಯ ಮುಂದೆ ಮಂಕಾಯಿತು. ಅಂತಿಮವಾಗಿ 25-15 ಅಂಕಗಳಿಂದ ಗೆಲುವು ಸಾಧಿಸಿದ ಸೌತ್ ವೆಸ್ಟರ್ನ್ ರೈಲ್ವೆ ತಂಡ ಚಾಂಪಿಯನ್ಶಿಪ್ ತನ್ನದಾಗಿಸಿಕೊಂಡಿತು.
ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆಗಳಿಗೆ ಮೈದಾನ ಸಾಕ್ಷಿ:
ಮಹಿಳಾ ಕಬಡ್ಡಿ ಪಂದ್ಯಾವಳಿಯುದ್ದಕ್ಕೂ ಕ್ರೀಡಾಂಗಣದಲ್ಲಿ ಕ್ರೀಡಾಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು. ಆಟಗಾರ್ತಿಯರ ಪ್ರತಿಯೊಂದು ಯಶಸ್ವಿ ದಾಳಿ, ಆಕರ್ಷಕ ಹಿಡಿತ ಹಾಗೂ ನಿರ್ಣಾಯಕ ಅಂಕಗಳ ಗಳಿಕೆಗೆ ಪ್ರೇಕ್ಷಕರು ಚಪ್ಪಾಳೆ, ಸಿಳ್ಳೆಗಳ ಮೂಲಕ ಪ್ರೋತ್ಸಾಹ ನೀಡಿದರು. ಸೋಲು-ಗೆಲುವಿನ ಲೆಕ್ಕಾಚಾರಕ್ಕಿಂತ ಕ್ರೀಡಾ ಸ್ಫೂರ್ತಿ, ಶಿಸ್ತು ಮತ್ತು ತಂಡದ ಒಗ್ಗಟ್ಟು ಪಂದ್ಯಾವಳಿಯ ವಿಶೇಷ ಆಕರ್ಷಣೆಯಾಗಿತ್ತು.
ಕನ್ನಡ ಸಂಘದ ಆರು ದಶಕಗಳ ಸೇವಾ ಪಯಣಕ್ಕೆ ಕ್ರೀಡಾ ವೈಭವದ ಮೆರುಗು ನೀಡಿದ ಈ ರಾಷ್ಟ್ರಮಟ್ಟದ ಪಂದ್ಯಾವಳಿ, ಮಹಿಳಾ ಕ್ರೀಡಾಪಟುಗಳ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಅನಾವರಣಗೊಳಿಸಿತು. ಜಮಖಂಡಿಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿ ಮಹಿಳಾ ಕಬಡ್ಡಿ ಪಂದ್ಯಾವಳಿ ಗಮನ ಸೆಳೆಯಿತು.
ವಾಲಿಬಾಲ್ನಲ್ಲೂ ಜಿದ್ದಾಜಿದ್ದಿ: ಜಮಖಂಡಿ ಟೈಗರ್ಸ್ಗೆ ಗಮನಾರ್ಹ ಗೆಲುವು
ಕ್ರೀಡಾಕೂಟದ ವಾಲಿಬಾಲ್ ಪಂದ್ಯಗಳಲ್ಲಿಯೂ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಜಮಖಂಡಿ ಟೈಗರ್ಸ್ ತಂಡ 55-44 ಅಂಕಗಳಿಂದ ಸ್ಪೋರ್ಟ್ಸ್ ಬೆಂಗಳೂರು ತಂಡವನ್ನು ಹಾಗೂ 50-36 ಅಂಕಗಳಿಂದ ಸಾಂಗಲಿ ತಂಡವನ್ನು ಮಣಿಸಿ ಗಮನ ಸೆಳೆಯಿತು. ಆದರೆ ಸೌತ್ ವೆಸ್ಟರ್ನ್ ರೈಲ್ವೆ ವಿರುದ್ಧ 40-43 ಅಂಕಗಳಿಂದ ಸೋಲು ಅನುಭವಿಸಿತು.
ಇನ್ನು ಕರ್ನಾಟಕ ಸ್ಟೇಟ್ ಪೊಲೀಸ್ ತಂಡ ಸೌತ್ ವೆಸ್ಟರ್ನ್ ರೈಲ್ವೆ ವಿರುದ್ಧ 65-54 ಹಾಗೂ ಸ್ಪೋರ್ಟ್ಸ್ ಬೆಂಗಳೂರು ವಿರುದ್ಧ 50-40 ಅಂಕಗಳಿಂದ ಗೆಲುವು ಸಾಧಿಸಿತು. ಹೈದರಾಬಾದ್ ತಂಡ 50-43 ಅಂಕಗಳಿAದ ಕೊಲ್ಲಾಪುರ ತಂಡವನ್ನು ಮಣಿಸಿತು. ಸಿಕಂದರಾಬಾದ್ ಆರ್ಮಿ ತಂಡ ಹೈದರಾಬಾದ್ ವಿರುದ್ಧ 51-47 ಹಾಗೂ ಸ್ಪೋರ್ಟ್ಸ್ ಹಾಸ್ಟೆಲ್ ಬೆಂಗಳೂರು ವಿರುದ್ಧ 50-40 ಅಂಕಗಳಿಂದ ಜಯಗಳಿಸಿತು.
ಇನ್ಕಮ್ ಟ್ಯಾಕ್ಸ್ ತಂಡ ಕೊಲ್ಲಾಪುರ ವಿರುದ್ಧ 80-32 ಅಂಕಗಳ ಭರ್ಜರಿ ಗೆಲುವು ದಾಖಲಿಸಿತು. ಲಾಯಲ್ ಮೆಟಲ್ ಮತ್ತು ಸೌತ್ ವೆಸ್ಟರ್ನ್ ರೈಲ್ವೆ ತಂಡಗಳು 66-66 ಅಂಕಗಳೊಂದಿಗೆ ಸಮಬಲ ಸಾಧಿಸಿದವು.