ಮುಖ್ಯ ವಿಷಯಕ್ಕೆ ತೆರಳಿ
ನಾದಫ್ ಸಾರಥ್ಯದಲ್ಲಿ ಹೊಸಬೆಳಕು
ಕ್ರೀಡೆ

ಜಮಖಂಡಿ ಕ್ರೀಡಾಂಗಣದಲ್ಲಿ ಕ್ರೀಡಾ ಕಿಚ್ಚು!

ಬರಹ: ಎಂ. ಎನ್. ನದಾಫ್2 ನಿಮಿಷ ಓದು

ಆಟಗಾರರ ಜಿದ್ದಾಜಿದ್ದಿನ ಹೋರಾಟಕ್ಕೆ ಪ್ರೇಕ್ಷಕರು ಫಿದಾ ವಾಲಿಬಾಲ್‌ನಲ್ಲಿ ಸ್ಮ್ಯಾಷ್‌ಗಳ ಅಬ್ಬರ, ಕಬಡ್ಡಿಯಲ್ಲಿ ರೈಡರ್‌ಗಳ ಚಮತ್ಕಾರ; ಕೊನೆಯ ಕ್ಷಣದವರೆಗೂ ರೋಚಕ ಹಣಾಹಣಿ

ಎಂ.ಎನ್. ನದಾಫ್ | ಜಮಖಂಡಿ

ಅಂಕಣದಲ್ಲಿ ಚೆಂಡಿನ ಚುರುಕಿನ ಓಟ, ಆಟಗಾರರ ಮೈನವಿರೇಳಿಸುವ ಜಿಗಿತ, ಎದುರಾಳಿಗಳ ಕೋಟೆ ಭೇದಿಸುವ ಆಕ್ರಮಣಕಾರಿ ಅಬ್ಬರ, ಮತ್ತೊಂದೆಡೆ ಕಬಡ್ಡಿ ಅಂಕಣದಲ್ಲಿ ರೈಡರ್‌ಗಳ ಮಿಂಚಿನ ದಾಳಿ, ರಕ್ಷಣಾತ್ಮಕ ಆಟಗಾರರ ಬಿಗಿ ಹಿಡಿತ… ಹೀಗೆ ಒಂದೆಡೆ ವಾಲಿಬಾಲ್‌ನ ರೋಚಕತೆ, ಮತ್ತೊಂದೆಡೆ ಕಬಡ್ಡಿಯ ರಣತಂತ್ರ. ಆಟಗಾರರ ಜಿದ್ದಾಜಿದ್ದಿನ ಹೋರಾಟಕ್ಕೆ ಕ್ರೀಡಾಭಿಮಾನಿಗಳ ಕೇಕೆ, ಸಿಳ್ಳೆ, ಚಪ್ಪಾಳೆಗಳು ಸಾಥ್ ನೀಡಿದವು.

ಕನ್ನಡ ಸಂಘದ 60ನೇ ವರ್ಷದ ಷಷ್ಠ್ಯಬ್ದಿ ಮಹೋತ್ಸವದ ಅಂಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಪುರುಷರ ವಾಲಿಬಾಲ್ ಹಾಗೂ ಪುರುಷರ ಲೀಗ್ ಕಬಡ್ಡಿ ಪಂದ್ಯಾವಳಿಗಳು ಕ್ರೀಡಾಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿವೆ. ಕ್ರೀಡಾಂಗಣವೇ ಕ್ರೀಡಾ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದೆ.

ವಾಲಿಬಾಲ್‌ನಲ್ಲಿ ಸ್ಮ್ಯಾಷ್‌ಗಳ ಅಬ್ಬರ

ವಾಲಿಬಾಲ್ ಅಂಕಣದಲ್ಲಿ ಪ್ರತಿ ತಂಡವೂ ಗೆಲುವಿಗಾಗಿ ತಂತ್ರಗಾರಿಕೆ ರೂಪಿಸಿ ಸೆಣಸಾಡಿತು. ನೆಟ್ ಸಮೀಪದ ಎತ್ತರದ ಜಿಗಿತ, ಬಲಿಷ್ಠ ಸ್ಮ್ಯಾಷ್‌ಗಳು, ಎದುರಾಳಿಗಳ ದಾಳಿಯನ್ನು ತಡೆಯುವ ಚುರುಕಿನ ರಕ್ಷಣಾತ್ಮಕ ಆಟ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಒಂದು ಅಂಕಕ್ಕಾಗಿ ಆಟಗಾರರು ನಡೆಸಿದ ಹೋರಾಟ ಪಂದ್ಯಗಳಿಗೆ ಮತ್ತಷ್ಟು ಕಾವು ನೀಡಿತು.

ಇಂಡಿಯನ್ ಆರ್ಮಿ ತಂಡ ಇನ್‌ಕಮ್ ಟ್ಯಾಕ್ಸ್ ಪುಣೆ ತಂಡವನ್ನು 2-0 ಸೆಟ್‌ಗಳಿಂದ ಮಣಿಸಿ ಸಾಮರ್ಥ್ಯ ಪ್ರದರ್ಶಿಸಿತು. ಜಮಖಂಡಿ ಟೈಗರ್ಸ್ ತಂಡ ಲೋಯಲ್ ಗಡಚಿರೋಳಿ ತಂಡವನ್ನು 2-0 ಸೆಟ್‌ಗಳಿಂದ ಸೋಲಿಸಿತು. ಸ್ಪೋರ್ಟ್ಸ್ ಹಾಸ್ಟೆಲ್ ಬೆಂಗಳೂರು ತಂಡ ಸಾಂಗ್ಲಿ ತಂಡವನ್ನು 2-0 ಸೆಟ್‌ಗಳಿಂದ ಮಣಿಸಿತು. ಹೈದರಾಬಾದ್ ರಾಯಲ್ ತಂಡ ಸ್ಪೋರ್ಟ್ಸ್ ಹಾಸ್ಟೆಲ್ ಬೆಳಗಾವಿ ವಿರುದ್ಧ 2-0 ಸೆಟ್‌ಗಳಿಂದ ಗೆಲುವು ಸಾಧಿಸಿತು.

ಜಮಖಂಡಿ ಟೈಗರ್ಸ್ ತಂಡ ಕರ್ನಾಟಕ ಸ್ಟೇಟ್ ಪೊಲೀಸ್ ಬೆಂಗಳೂರು ವಿರುದ್ಧ 2-1 ಸೆಟ್‌ಗಳಿಂದ ಗೆಲುವು ದಾಖಲಿಸಿತು. ಲೋಯಲ್ ಮೆಟಲ್ ತಂಡ ಸ್ಪೋರ್ಟ್ಸ್ ಹಾಸ್ಟೆಲ್ ಬೆಂಗಳೂರು ವಿರುದ್ಧ 2-0 ಸೆಟ್‌ಗಳಿಂದ ಜಯಗಳಿಸಿತು. ಇಂಡಿಯನ್ ಆರ್ಮಿ ಸಿಕಂದರಾಬಾದ್ ತಂಡ ಜಯಂತ್ ಸ್ಪೋರ್ಟ್ಸ್ ಕೊಲ್ಲಾಪುರ ತಂಡವನ್ನು 2-0 ಸೆಟ್‌ಗಳಿಂದ ಸೋಲಿಸಿತು. ಕರ್ನಾಟಕ ಸ್ಟೇಟ್ ಪೊಲೀಸ್ ತಂಡ ಲೋಯಲ್ ಮೆಟಲ್ ಗಡಚಿರೋಳಿ ವಿರುದ್ಧ 2-0 ಸೆಟ್‌ಗಳಿಂದ ಗೆಲುವು ಪಡೆಯಿತು.

ಕಬಡ್ಡಿ ಅಂಕಣದಲ್ಲಿ ರೈಡರ್‌ಗಳ ರಣಕಹಳೆ

ಪುರುಷರ ಲೀಗ್ ಕಬಡ್ಡಿ ಪಂದ್ಯಾವಳಿಯಲ್ಲಿ ರೈಡರ್‌ಗಳ ಚುರುಕಿನ ದಾಳಿ, ಡಿಫೆಂಡರ್‌ಗಳ ಬಿಗಿ ಹಿಡಿತ ಹಾಗೂ ಕೊನೆಯ ಕ್ಷಣದವರೆಗೂ ಅಂಕಗಳಿಗಾಗಿ ನಡೆದ ಪೈಪೋಟಿ ಕ್ರೀಡಾಭಿಮಾನಿಗಳ ಉಸಿರು ಬಿಗಿಹಿಡಿಯುವಂತೆ ಮಾಡಿತು. ಎದುರಾಳಿ ತಂಡದ ಆಟಗಾರರನ್ನು ಔಟ್ ಮಾಡುವ ಸಾಹಸಮಯ ರೈಡ್‌ಗಳು ಹಾಗೂ ಬೋನಸ್ ಅಂಕಗಳಿಗಾಗಿ ನಡೆದ ಕಸರತ್ತು ಪಂದ್ಯಗಳ ರೋಚಕತೆಯನ್ನು ಹೆಚ್ಚಿಸಿದವು.

ತಮಿಳ್ ತಳವೈಸ್ ತಂಡ ಡಿ.ಕೆ. ದೋಸ್ತ ತಂಡವನ್ನು 28-17 ಅಂಕಗಳಿAದ ಮಣಿಸಿತು. ದಾವಣಗೆರೆ ತಂಡ ಸ್ವಾಮಿ ನಾರಾಯಣ ಗುಜರಾತ್ ವಿರುದ್ಧ 34-20 ಅಂಕಗಳಿAದ ಗೆಲುವು ಸಾಧಿಸಿತು. ಆರ್‌ಡಬ್ಲ್ಯುಎಫ್ ಬೆಂಗಳೂರು ತಂಡ ಸ್ವಾಮಿ ನಾರಾಯಣ ಗುಜರಾತ್ ತಂಡವನ್ನು 38-20 ಅಂಕಗಳಿಂದ ಸೋಲಿಸಿತು. ಸ್ವಾಮಿ ನಾರಾಯಣ ತಂಡ ಬೆಳಗಾವಿ ಜಿಲ್ಲಾ ತಂಡವನ್ನು 24-8 ಅಂಕಗಳಿಂದ ಮಣಿಸಿತು.

ಟಿಎಂಸಿ ಠಾಣೆ ತಂಡ ಚಿತ್ರದುರ್ಗವನ್ನು 23-7 ಅಂಕಗಳಿಂದ ಹಾಗೂ ವಿಜಯಪುರ ತಂಡವನ್ನು 31-19 ಅಂಕಗಳಿಂದ ಸೋಲಿಸಿತು. ಬ್ಯಾಂಕ್ ಆಫ್ ಬರೋಡಾ ತಂಡ ವಿಜಯಪುರ ಜಿಲ್ಲಾ ತಂಡವನ್ನು 16-2 ಅಂಕಗಳಿಂದ ಮಣಿಸಿತು. ವಿಜಯಪುರ ಜಿಲ್ಲಾ ತಂಡ ಚಿತ್ರದುರ್ಗ ವಿರುದ್ಧ 34-26 ಅಂಕಗಳಿಂದ ಜಯಗಳಿಸಿತು. ಬೆಳಗಾವಿ ಜಿಲ್ಲಾ ತಂಡ ದಾವಣಗೆರೆಯನ್ನು 21-17 ಅಂಕಗಳಿಂದ ಸೋಲಿಸಿತು.

ಪೌಜಿ ಅಕಾಡೆಮಿ ಹರಿಯಾಣ ತಂಡ ಕಿಲ್ಲೇದಾರ ಎಂಟರ್‌ಪ್ರೈಸಸ್ ಮುಂಬೈ ವಿರುದ್ಧ 22-15 ಅಂಕಗಳಿಂದ ಗೆಲುವು ಸಾಧಿಸಿತು. ಪರ್ಲ್ಸ್ ಮುಂಬೈ ತಂಡ ತಾಜ್ ಭವಾನಿ ಮುಂಬೈ ವಿರುದ್ಧ 25-3 ಅಂಕಗಳಿಂದ ಭರ್ಜರಿ ಜಯ ದಾಖಲಿಸಿತು. ಕಿಲ್ಲೇದಾರ ಎಂಟರ್‌ಪ್ರೈಸಸ್ ತಂಡ ತಾಜ್ ಭವಾನಿ ತಂಡವನ್ನು 29-11 ಅಂಕಗಳಿಂದ ಮಣಿಸಿತು.

ಮಿಡ್ಲ್ಯಿನ ಮುಂಬೈ ತಂಡ ಇನ್‌ಕಮ್ ಟ್ಯಾಕ್ಸ್ ಪುಣೆ ವಿರುದ್ಧ 25-8 ಅಂಕಗಳಿಂದ ಗೆಲುವು ಸಾಧಿಸಿದರೆ, ಬಾಗಲಕೋಟೆ ತಂಡ ಮಿಡ್ಲ್ಯಿನ ಮುಂಬೈ ವಿರುದ್ಧ 31-17 ಅಂಕಗಳಿಂದ ಜಯಗಳಿಸಿತು. ಬಾಗಲಕೋಟೆ ತಂಡ ಧಾರವಾಡವನ್ನು 25-14 ಅಂಕಗಳಿಂದ ಮಣಿಸಿತು. ಧಾರವಾಡ ತಂಡ ಇನ್‌ಕಮ್ ಟ್ಯಾಕ್ಸ್ ಪುಣೆ ವಿರುದ್ಧ 19-10 ಅಂಕಗಳಿಂದ ಗೆಲುವು ಸಾಧಿಸಿತು. ಧಾರವಾಡ ತಂಡ ಬಳ್ಳಾರಿ ವಿರುದ್ಧ 27-17 ಅಂಕಗಳಿಂದ ಜಯಗಳಿಸಿತು. ತಮಿಳ್ ತಳವೈಸ್ ತಂಡ ಆರ್‌ಬಿಎಸ್‌ಸಿ ಮುಂಬೈ ವಿರುದ್ಧ 21-18 ಅಂಕಗಳಿಂದ ಗೆಲುವು ಸಾಧಿಸಿತು. ಮುಂಬೈ ಪೊಲೀಸ್ ತಂಡ ಡಿ.ಕೆ. ದೋಸ್ತ ವಿರುದ್ಧ 26-24 ಅಂಕಗಳಿಂದ ರೋಚಕ ಜಯ ದಾಖಲಿಸಿತು.

ಕ್ರೀಡಾ ಹಬ್ಬಕ್ಕೆ ಪ್ರೇಕ್ಷಕರೇ ಶಕ್ತಿ

ಪಂದ್ಯಗಳ ನಡುವೆ ಪ್ರೇಕ್ಷಕರ ಉತ್ಸಾಹವೂ ಆಟಗಾರರಿಗೆ ಸ್ಫೂರ್ತಿಯಾಯಿತು. ಪ್ರತಿಯೊಂದು ಸ್ಮ್ಯಾಷ್‌ಗೆ ಚಪ್ಪಾಳೆ, ಪ್ರತಿಯೊಂದು ಯಶಸ್ವಿ ರೈಡ್‌ಗೆ ಕೇಕೆ, ನಿರ್ಣಾಯಕ ಅಂಕ ಗಳಿಸಿದಾಗ ಮುಗಿಲು ಮುಟ್ಟಿದ ಹರ್ಷೋದ್ಗಾರ ಕ್ರೀಡಾಂಗಣದ ವಾತಾವರಣವನ್ನು ಮತ್ತಷ್ಟು ಕಳೆಗಟ್ಟಿಸಿತು.

ಗೆಲುವಿನ ಸಂಭ್ರಮದಲ್ಲಿ ಆಟಗಾರರ ಮುಖದಲ್ಲಿ ಆತ್ಮವಿಶ್ವಾಸ ಮಿನುಗಿದರೆ, ಸೋಲಿನ ನಡುವೆಯೂ ಕ್ರೀಡಾಸ್ಫೂರ್ತಿ ಮೆರೆದ ತಂಡಗಳಿಗೆ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಪ್ರೋತ್ಸಾಹ ನೀಡಿದರು. ರಾಜ್ಯದ ವಿವಿಧ ಭಾಗಗಳು ಹಾಗೂ ಹೊರರಾಜ್ಯಗಳಿಂದ ಆಗಮಿಸಿರುವ ತಂಡಗಳ ಪಾಲ್ಗೊಳ್ಳುವಿಕೆ ಪಂದ್ಯಾವಳಿಗೆ ರಾಷ್ಟೀಯ ಮೆರುಗು ನೀಡಿದೆ.

ವಿಷಯಗಳು