ನ.13ಕ್ಕೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ-ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಹಿತಿ


ದೇಶದ ವಿವಿಧ ರಾಜ್ಯಗಳ ಮಹಿಳಾ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಐತಿಹಾಸಿಕ ರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರು ಸಾಕ್ಷಿಯಾಗಲಿದ್ದು, ಕಾಮನ್ ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಘಟಕದ ಸಮ್ಮೇಳನ ನವೆಂಬರ್ 17 ಮತ್ತು 18ರಂದು ನಡೆಯಲಿದೆ ಎಂದು ವಿಧಾನಪರಿಷತ್ ಸಭಾಪತಿ ಸಲೀಂ ಅಹಮದ್ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮಹಿಳಾ ಸಂಸದರು, ಮಹಿಳಾ ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು, ಶಾಸಕಿಯರು, ವಿಧಾನಪರಿಷತ್ ಸದಸ್ಯರೂ ಸೇರಿದಂತೆ ಸುಮಾರು 150 ಪ್ರತಿನಿಧಿಗಳು, ಜೊತೆಗೆ ಕಾಮನ್ ವೆಲ್
ಬೆಂಗಳೂರು: ದೇಶದ ವಿವಿಧ ರಾಜ್ಯಗಳ ಮಹಿಳಾ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಐತಿಹಾಸಿಕ ರಾಷ್ಟ್ರೀಯ ಸಮ್ಮೇಳನಕ್ಕೆ ಬೆಂಗಳೂರು ಸಾಕ್ಷಿಯಾಗಲಿದ್ದು, ಕಾಮನ್ ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಘಟಕದ ಸಮ್ಮೇಳನ ನವೆಂಬರ್ 17 ಮತ್ತು 18ರಂದು ನಡೆಯಲಿದೆ ಎಂದು ವಿಧಾನಪರಿಷತ್ ಸಭಾಪತಿ ಸಲೀಂ ಅಹಮದ್ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮಹಿಳಾ ಸಂಸದರು, ಮಹಿಳಾ ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು, ಶಾಸಕಿಯರು, ವಿಧಾನಪರಿಷತ್ ಸದಸ್ಯರೂ ಸೇರಿದಂತೆ ಸುಮಾರು 150 ಪ್ರತಿನಿಧಿಗಳು, ಜೊತೆಗೆ ಕಾಮನ್ ವೆಲ್ತ್ ಸಂಸದೀಯ ಸಂಘದ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನವೆಂಬರ್ 17ರಂದು ನಡೆಯಲಿರುವ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ರಾಜ್ಯಸಭಾ ಉಪ ಸಭಾಪತಿ ಹರಿವಂಶ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಉಭಯ ಸದನಗಳ ಪೀಠಾಸೀನಾಧಿಕಾರಿಗಳು, ಸಚಿವರು ಹಾಗೂ ಕಾಮನ್ ವೆಲ್ತ್ ಮಹಿಳಾ ಸಂಸದೀಯರ ಭಾರತದ ಪ್ರಾದೇಶಿಕ ಘಟಕದ ಅಧ್ಯಕ್ಷೆ ಡಿ. ಪುರಂದರೇಶ್ವರಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ಸೈಬರ್ ಸುರಕ್ಷತೆ ಕುರಿತು ಚರ್ಚೆ ನಡೆಯಲಿದ್ದು, ಮಹಿಳಾ ಜನಪ್ರತಿನಿಧಿಗಳ ಸುರಕ್ಷತೆಯನ್ನೂ ಖಾತ್ರಿಪಡಿಸುವುದು ಹಾಗೂ ಮೊದಲ ಬಾರಿಗೆ ಶಾಸನ ಸಭೆಗಳಿಗೆ ಆಯ್ಕೆಯಾಗಿರುವ ಮಹಿಳಾ ಜನಪ್ರತಿನಿಧಿಗಳಿಗೆ ಅಗತ್ಯ ಮಾರ್ಗದರ್ಶನ, ಸಾಂಸ್ಥಿಕ ಬೆಂಬಲ ಒದಗಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಡಿಜಿಟಲ್ ತಂತ್ರಜ್ಞಾನ, ಮಹಿಳೆಯರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಆದರೆ, ಸೈಬರ್ ಕಿರುಕುಳ, ಆನ್ ಲೈನ್ ದೌರ್ಜನ್ಯ, ಡೀಫ್ ಫೇಕ್ ಹಾಗೂ ವೈಯಕ್ತಿಕ ಮಾಹಿತಿ ದುರ್ಬಳಕೆಯಂತಹ ಗಂಭೀರ ಸವಾಲುಗಳನ್ನು ಎದುರಿಸಬೇಕಾಗಿದೆ. ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿರುವ ಮಹಿಳೆಯರ ಡಿಜಿಟಲ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದ್ದು, ಮಹಿಳಾ ಜನಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಈ ವಿಷಯ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ್, ದೇಶದ ವಿವಿಧ ರಾಜ್ಯಗಳ ಮಹಿಳಾ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ಕರೆ ತರುವುದು ಸಮ್ಮೇಳನದ ಮುಖ್ಯ ಗುರಿಯಾಗಿದ್ದು, ದೇಶದ ಸಂಸದೀಯ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಮಹಿಳೆಯರ ಪರಿಣಾಮಕಾರಿ ಪಾಲ್ಗೊಳ್ಳುವಿಕೆಯಾಗಿದೆ. ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ಜೊತೆಗೆ, ಶಾಸನ ರಚನೆ ಮತ್ತು ಆಡಳಿತದಲ್ಲಿ ಅವರ ನಾಯಕತ್ವವೂ ಬಲಗೊಳ್ಳಬೇಕಾಗಿದೆ ಎಂದರು.
ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಮ್ಮೇಳನ ಹೊಸ ವಿಚಾರಗಳು, ಉತ್ತಮ ಶಾಸನ ಪದ್ಧತಿಗಳು ಹಾಗೂ ಅನುಭವಗಳ ವಿನಿಮಯಕ್ಕೆ ವೇದಿಕೆಯಾಗಲಿದೆ. ದೇಶದ ವಿವಿಧ ರಾಜ್ಯಗಳ ಮಹಿಳಾ ಜನಪ್ರತಿನಿಧಿಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳಿಗೆ ಕಂಡುಕೊಂಡಿರುವ ಪರಿಹಾರಗಳ ಬಗ್ಗೆ ಚರ್ಚೆ ನಡೆಯಲಿದೆ. ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನಕ್ಕೆ ಆತಿಥ್ಯ ವಹಿಸಿರುವುದು ಸಂತಸ ತಂದಿದೆ ಎಂದರು.