ಮುಖ್ಯ ವಿಷಯಕ್ಕೆ ತೆರಳಿ
ನಾದಫ್ ಸಾರಥ್ಯದಲ್ಲಿ ಹೊಸಬೆಳಕು
ಯಶೋಗಾಥೆ

ಬರದ ನಡುವೆ ವೀಳ್ಯದೆಲೆ ಕೃಷಿಯಲ್ಲಿ ಯಶಸ್ಸು-ಮಿಶ್ರ ಬೆಳೆ ಬೇಸಾಯಲ್ಲಿ ಲಾಭ ಕಂಡ ರೈತ

ಬರಹ: ಎಂ. ಎನ್. ನದಾಫ್1 ನಿಮಿಷ ಓದು

ಗಣಿಗಾರಿಕೆಗೆ ಹೆಸರಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಕೃಷಿ ಮಾಡುವುದೆಂದರೆ ಸವಾಲುಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ರೈತನೊರ್ವ ಬಿಸಿಲು, ನೀರಿನ ಕೊರತೆ ಹಾಗೂ ಬರ ಪರಿಸ್ಥಿತಿಯ ನಡುವೆಯೂ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ವೀಳ್ಯದೆಲೆ ಕೃಷಿ ಮಾಡಿ ಮಾದರಿಯಾಗಿದ್ದಾರೆ. ಬನ್ನಿ ನೋಡೋಣ ಈ ಸಾಧಕ ರೈತನ ಕುರಿತ ಒಂದು ವರದಿ.

ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಬಳ್ಳಾರಿ ಜಿಲ್ಲೆ ಸಂಡೂರಿನ ರೈತ K. ಬಸಪ್ಪ ಸಾಕ್ಷಿಯಾಗಿದ್ದಾರೆ.

ಫಲವತ್ತಾದ ಭೂಮಿಗೆ ನೀರಿನ ಕೊರತೆ ಇದ್ದರೂ, ಸಮಸ್ಯೆಗಳಿಗೆ ಎದೆ ಗುಂದದೆ ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಸಮಗ್ರ ಕೃಷಿಯಲ್ಲಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ಮಿಶ್ರ ಬೆಳೆ ಬೇಸಾಯ ಪದ್ಧತಿಯಲ್ಲಿ ವೀಳ್ಯದೆಲೆ ಕೃಷಿಗೂ ಹೆಚ್ಚಿನ ಆದ್ಯತೆ ನೀಡಿದ್ದು, ಉತ್ತಮ ಲಾಭ ಪಡೆಯುತ್ತಿದ್ದಾರೆ.

ಎಲೆಯ ಸುವಾಸನೆ, ರುಚಿ, ಗಾತ್ರದ ಅಧಾರದ ಮೇಲೆ ಕರಿಬಳ್ಳಿ, ನಾಗಬಳ್ಳಿ, ಜನಬಳ್ಳಿ, ಚಪುಬಳ್ಳಿ, ಮರ ಎಲೆ, ಅಬಾಂಡಿ ಎಲೆ, ಮದ್ರಾಸು ಎಲೆ, ಕಲ್ಕತ್ತಪಾನ್, ಕಣಿಗೆ ಎಲೆ, ಮೈಸೂರು ಎಲೆ ಎಂದು ವಿಗಂಡಿಸುತ್ತಾರೆ. ಔಷಧೀಯ ಗುಣಗಳನ್ನೂ ಹೊಂದಿರುವ ವೀಳ್ಯದೆಲೆ, ಶುಭ ಸಮಾರಂಭ, ಮದುವೆ ಅಥವಾ ಪೂಜೆಗೆ ಹೆಚ್ಚಾಗಿ ಬಳಸುವುದರಿಂದ ದೊಡ್ಡ ಪ್ರಮಾಣದ ಆದಾಯ ತಂದುಕೊಡುವ ಪ್ರಮುಖ ವಾಣಿಜ್ಯ ಬೆಳೆಯಾಗಿಯೂ ಗುರುತಿಸಿಕೊಂಡಿದೆ.

ದೂರದರ್ಶನದೊಂದಿಗೆ ರೈತ K. ಬಸಪ್ಪ, ಈ ಮೊದಲು ಮೆಕ್ಕೆಜೋಳ ಬೆಳೆಯುತ್ತಿದ್ದೆ. ಇದು, ವರ್ಷಕ್ಕೆ ಒಂದು ಸಲ ಬೆಳೆ ಮತ್ತು ಆದಾಯ ಬರುತ್ತಿತ್ತು. ಅದರೆ ವೀಳ್ಯದೆಲೆ ಪ್ರತಿ ತಿಂಗಳು ನಿರಂತರ ಆದಾಯ ಬರುತ್ತಿದ್ದು, ಹೆಚ್ಚಿನ ಲಾಭ ತರುತ್ತಿದೆ ಎಂದು ಮಾಹಿತಿ ನೀಡಿದರು.

ವ್ಯಾಪಾರಿ ನಾಗರಾಜ್, ಸಂಡೂರು ಸುತ್ತಮುತ್ತ ವೀಳ್ಯದೆಲೆ ಖರೀದಿ ಮಾಡಿ ಮಾರಾಟ ಮಾಡುತ್ತೇವೆ. ಇಲ್ಲಿನ ತೋಟದ ಮಾಲೀಕ ಬಸಪ್ಪ ನವರ ಸಹಕಾರ ಬಹಳಷ್ಟಿದೆ ಎಂದರು.

ಮತ್ತೊರ್ವ ರೈತ ತೆಕ್ಕಲಕೋಟೆ ರಾಚಪ್ಪ, ಬರದ ನಡುವೆಯೂ ಬಸಪ್ಪನವರು ತಮಗೆ ಲಭ್ಯವಿರುವ ನೀರನ್ನು ಸದ್ಭಳಕೆ ಮಾಡಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿದ್ದು ಇವರಿಗೆ ಹತ್ತು ಹಲವು ಪ್ರಶಸ್ತಿಗಳೂ ಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಾಯಕ ತೋಟಗಾರಿಕಾ ಅಧಿಕಾರಿ ಡಾ.ಉದಯ್, ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಉದ್ಯೋಗಿಗಳು ಕೃಷಿಯತ್ತ ಮುಂದಾಗುತ್ತಿದ್ದಾರೆ. ಕೃಷಿಯನ್ನು ಅಯ್ದುಕೊಂಡರೇ ನಿರಂತರ ಅದಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹನುಮೇಶ್ ನಾಯಕ್, ಜಿಲ್ಲೆಯಲ್ಲಿ ಹೆಚ್ಚಿನ ರೈತರು ವೀಳ್ಯದೆಲೆ ಕೃಷಿಯನ್ನು ಮಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು.

ಒಟ್ಟಾರೆಯಾಗಿ ಬರದ ನಾಡಿನಲ್ಲೂ ಪರಿಶ್ರಮ, ಅನುಭವ ಮತ್ತು ಕೃಷಿಯ ಮೇಲಿನ ಆಸಕ್ತಿ ಇದ್ದರೆ ಭೂಮಿಯನ್ನು ಹಸಿರಾಗಿಸುವುದರ ಜೊತೆಗೆ ಲಾಭವನ್ನೂ ಪಡೆಯಬಹುದು ಎಂಬುದಕ್ಕೆ ರೈತ ಬಸಪ್ಪ ಅವರ ವೀಳ್ಯದೆಲೆ ಕೃಷಿ ಇತರೆ ರೈತರಿಗೂ ಮಾದರಿಯಾಗಿದೆ..